ಮಂಗಳವಾರ, ಫೆಬ್ರವರಿ 20, 2018

ಅಜ್ಜನ ಕೋಲಿದು ನನ್ನಯ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ

ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


ಚಂದಪ್ಪನಿಗೆ
ಚಿಗರೆಯೇ ಕುದುರೆ
ಮಾದೇವನಿಗೆ ನಂದಿಯೇ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲಿಯೇ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ

ಅರಬರ ದೇಶದಿ ದೊರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗೆ ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


--ಕವಿ ಸಿದ್ದಯ್ಯ ಪುರಾಣಿಕ್

ಶುಕ್ರವಾರ, ಫೆಬ್ರವರಿ 09, 2018

ರಾಮಯಾಣದ ಸ್ವಾರಸ್ಯ ಸಂಗತಿಗಳು 4

ರಾಮ ಶಿವಧನುಸ್ಸನ್ನು ಮುರಿಯಲಿಲ್ಲ

          ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ರಾಮ ಸೀತೆಯನ್ನು ಮದುವೆಯಾದ ಎಂಬ ಜನಪ್ರಿಯ ಕತೆ ಚಾಲ್ತಿಯಲ್ಲಿದೆ. ಆದರೆ, ಮೂಲ ವಾಲ್ಮೀಕಿ ರಾಮಾಯಣದಲ್ಲಿ ಈ ಸನ್ನಿವೇಶವೇ ಇಲ್ಲ. ಶಿವನ ಧನುಸ್ಸನ್ನು ಹೆದೆಗೇರಿಸಿ ರಾಮ ಮುರಿದ ಎಂಬ ಘಟನೆ ಬರುವುದು ತುಳಸೀದಾಸರ ರಾಮಾಯಣದಲ್ಲಿ. ಇದೊಂದು ರೋಚಕ ಕತೆಆಗಿರುವುದರಿಂದ ಎಲ್ಲರ ಮನಸ್ಸಿನಲ್ಲೂ ಉಳಿದಿರಬೇಕು.       ಕೃಪೆ : ಕೆ.ಟಿ.ಆರ್

ಮಂಗಳವಾರ, ಫೆಬ್ರವರಿ 06, 2018

"ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ....

ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ...  ಬೇಗ ಹೇಳಿ….

ನಿಮ್ಮ ಉತ್ತರ

ಈ ತಾಣಕ್ಕೆ ಕಮೆಂಟ್ 
ಅಥವಾ
8951734903 ಗೆ ಸಂದೇಶ / ವಾಟ್ಸ್ಯಾಪ್ 
ಅಥವಾ 
ಟೆಲಿಗ್ರಾಮ https://t.me/joinchat/AAAAAEDPKsqF5ygl2NqaRA ಗೆ ಉತ್ತರ 
ಅಥವಾ
E-mail
..
spn3187@gmail.com

ಶನಿವಾರ, ಫೆಬ್ರವರಿ 03, 2018

ಆಧಾರ

ಹೊಟ್ಟೆಯಲ್ಲಿ ಮಗುವಾಗಿ ,

ಮಗುವಿದ್ಧಾಗ ಹೆಸರಾಗಿ,

ಜೊತೆಯಲ್ಲಿರು ಅವರೆಗೆ ಸಂಬಂಧವಾಗಿ ,

ನೆಂಟರಲ್ಲಿ ಪ್ರೀತಿಯಾಗಿ ,

ವಿದ್ಯೆಯಲ್ಲಿ ಪರಿಣಿತರಾಗಿ ,

ಪ್ರೀತಿಯಲ್ಲಿ ಜೊತೆಯಾಗಿ ,

ಮಕ್ಕಳಲ್ಲಿ ಸ್ನೇಹಿತರಾಗಿ ,

ದೀಪಧಾಲ್ಲಿ ಎಣ್ಣೆಯಾಗಿ ,

ದೇವರಲ್ಲಿ ಮಂತ್ರ ಪುಷ್ಪವಾಗಿ ,

ಜೀವನದಿಯಲ್ಲಿ ಬೂದಿಯಾಗುವ ದೇಹಕೆ ಪ್ರೀತಿಯಾಗಿ,

ಸ್ನೇಹ ಒಂದೇ ಆಧಾರ.

ಬುಧವಾರ, ಜನವರಿ 31, 2018

ಸಾಯುತಿದೆ ನಮ್ಮನುಡಿ, ಓ ಕನ್ನಡದ ಕಂದರಿರ

ಸಾಯುತಿದೆ ನಮ್ಮನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಕೂಗಿಕೊಳ್ಳಲು ಕೂಡ ಬಲವಿಲ್ಲ: ಮಕ್ಕಳೇ
ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ!

ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿನುಡಿ;
ಕೊಲೆಗೈದರಮ್ಮನನೆ ಕೊಲಿಸಿದಂತೆ!
ತಾಯ್ ಮುತ್ತು ಕೊಡುವಂದು ನಿಮ್ಮ ಕೆನ್ನೆಯ ಮೇಲೆ
ಮೆರೆಯಿತದು ಪೋಣಿಸಿದ ಮುತ್ತಿನಂತೆ:
ನಿಮ್ಮ ನಲ್ಲೆಯರೊಡನೆ ನಲ್ನುಡಿಯ ನುಡಿವಂದು
ಕನ್ನಡವೆ ಕಲಿಸುವುದು ತುಟಿಗೆ ಬಂದು:
ನಡುವಂದು ನಿಮ್ಮ ಮುದ್ದಿನ ಹಸುಳೆಗಳನೆತ್ತಿ
ಕನ್ನಡವೆ ನಿಮಗೀವುದೊಲವ ತಂದು.

ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು
ಪರಭಾಷೆ ಮೋಹಕ್ಕೆ ಚೆಲ್ಲಬೇಡಿ;
ಹೂಮಾಲೆ ಸೂಡಿವೆವು ಕೊರಳಿಂಗೆ ಎಂದೆನುತೆ
ನೇಣುರುಳನೆಳೆದಯ್ಯೊ ಕೊಲ್ಲಬೇಡಿ.
ಪರಕೀಯರೆಲ್ಲರಾಶೀರ್ವಾದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು;
ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು;
ನಮ್ಮ ನಾಲಗೆ ನಮಗೆ ಕೀಳುತೊದಲು!

ನಿಮ್ಮ ನುಡಿ ನಿಮ್ಮ  ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ!
ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತ ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?

ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ,
ಗರ್ಜಿಸುವುದನು ಕಲಿತು ಸಿಂಹವಾಗಿ!
ನಖದಂಷ್ಟ್ರ ಕೇಸರಂಗಳ ಬೆಳೆಸಿ ಹುರಿಗೊಂಡು
ಶಿರವೆತ್ತಿ ನಿಂತು ಕುರಿತನವ ನೀಗಿ.

೩-೧೦-೧೯೩೫

ಭಾನುವಾರ, ಜನವರಿ 28, 2018

ತಿರುಕ - ರಾಜಕಾರಣಿ


ಒಬ್ಬ ತಿರುಕ ಹತ್ತು ಮನೆ ತಿರುಗಿ ಅನ್ನ ಸಂಗ್ರಹಿಸುತ್ತಾನೆ,
ಅದರಂತೆ
ಒಬ್ಬ ರಾಜಕಾರಣಿ ಹತ್ತು ಮನೆ ತಿರುಗಿ ಅಧಿಕಾರ ಸಂಗ್ರಹಿಸುತ್ತಾನೆ

ಬುಧವಾರ, ಜನವರಿ 24, 2018

ಹೊಗಳು

ಘನ ಕಾರ್ಯದ ಬಗೆಗಿನ ಶ್ಲಾಘನೆ
ಉತ್ತಮ ದಾರಿಯಲ್ಲಿರುವವರನ್ನು ದಾರಿ ತಪ್ಪಿಸಲು ಬಳಸುವ ತಂತ್ರ
ಸವೆಯದ ನಾಣ್ಯ; ಹರಿಯದ ನೋಟು
ಬೇಗ ವಾಪಸ್ ಕೊಟ್ಟುಬಿಡಬೇಕೆಂಬ ಉದ್ದೇಶದಿಂದ ಕೆಲವರು ಇದನ್ನು ನಮಗೆ ಕೊಟ್ಟಿರುತ್ತಾರೆ
ಇದನ್ನು ಅಡವು ಇಡಲಾಗದು
ಮಿತವಾಗಿದ್ದರೆ ನಮ್ಮೆಲ್ಲ ಶ್ರಮವನ್ನು ಮರೆಸುವಂಥದ್ದು. ಹೆಚ್ಚಾದರೆ ಕೆಲಸವನ್ನೇ ಮರೆಸುವಂಥದ್ದು
ಎಲ್ಲ ಗಳಿಕೆಗಳಿಗಿಂತಲೂ ಹೆಚ್ಚು ಖುಷಿಕೊಡುವ ಗಳಿಕೆ ಹೊ-ಗಳಿಕೆ
ಪ್ರಶಸ್ತ ಕಾರ್ಯದ ಬಗೆಗಿನ ಪ್ರಶಸ್ತಿ
ನಾನು ಹೊಗಳಿಕೆಯನ್ನು ಇಷ್ಟಪಡುವುದಿಲ್ಲ ಎಂಬ ಮಾತಿನ ಹಿಂದಿರೋದು ಕೂಡ ಇದರದ್ದೇ ಬಯಕೆ
ಮುದುಕಿಯನ್ನು ತರುಣಿಯಾಗಿಸುವಂಥ ಮದಿರೆ
ಕಾರ್ಯವಾಸಿ ಹೊಗಳು ಭಟ..
ತೆಗಳಿಕೆಗೆ ಬಗ್ಗದವನೂ ಹೊಗಳಿಕೆಗೆ ಹಿಗ್ಗುತ್ತಾನೆ
ಬೀಗರನ್ನು ಬೀಗಿಸುವ ಬೀಗದ ಕೈ
ಹೆಣ್ಣು ಕೊಡುವವರೆಗೆ...ಮಾವನನ್ನು, ಕೊಟ್ಟ ನಂತರ ಅಳಿಯನನ್ನು..
ಮೂರ್ಖ ಬಯಸುವ ಅಗುಳು

-ವಿಶ್ವನಾಥ ಸುಂಕಸಾಳ

ಸೋಮವಾರ, ಜನವರಿ 22, 2018

ಮಗುವಾಗೋ ಆಸೆ

ಅಮ್ಮ ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಮಗುವಾಗಿ 
ಮಲಗೋ ಆಸೆ
ನಾ ನಕ್ಕು ನಿನ್ನ ಮುಖದಲ್ಲೂ
ನಗುವನ್ನು ನೋಡೋ ಆಸೆ

ಅಮ್ಮ ನಿನ್ನ ತೋಳಲ್ಲಿ
ಮತ್ತೊಮ್ಮೆ ತೊನೆಯುತ್ತಾ
ಕೂರೋ ಆಸೆ
ಕಾಟವ ಸಹಿಸದೇ
ಹುಸಿ ಪೆಟ್ಟು ಕೊಟ್ಟಿರಲು
ಸುಮ್ಮನೇ ಸಿಟ್ಟನ್ನು 
ಮಾಡೋ ಆಸೆ

ಅಮ್ಮ ನೀ ಕೈ ಹಿಡಿದು ನಡೆದರೂ
ನಾ ತಪ್ಪಿಸಿ ಹೋಗಿ
ಬೀಳೋ ಆಸೆ
ನೋವೇನೂ ಆಗದಿದ್ದರೂ
ನಿನ ಕಂಡು ಸುಮ್ಸುಮ್ನೆ ಅಳುವ ಆಸೆ
ನೀ ನನ್ನ ರಮಿಸುವುದಾ
ಕೇಳೋ ಆಸೆ

ಅಮ್ಮ ನಿನ್ನ ಕೈಯಲ್ಲಿ
ಕೈ ತುತ್ತು ತಿನ್ನೋ ಆಸೆ
ಚಂದಿರನ ತೋರಿಸುತಾ
ನೀ ತುತ್ತು ತಿನಿಸಲು
ನಾ ಹೀಗೆ ಇರುವಾಸೆ
ಮತ್ತೊಮ್ಮೆ ಮಗುವಾಗೋ ಆಸೆ

POSTED BY .... ಪ್ರವೀಣ್ ಭಟ್